ಬಿಗ್ನೋನಿಯೇಸೀ
ಅಲಂಕಾರ ಪ್ರಾಮುಖ್ಯವುಳ್ಳ ಸಸ್ಯಗಳನ್ನೊಳಗೊಂಡ ಕುಟುಂಬ. ದ್ವಿದಳ ಸಸ್ಯ ಗುಂಪು. ಸಿಂಪೆಟಲೀ ವಿಭಾಗ ಟ್ಯೂಬಿಫ್ಲೋರಿ ಉಪವಿಭಾಗ ಪರ್ಸೊನೇಲೀಸ್ ಗಣಕ್ಕೆ ಸೇರಿದೆ. ಸ್ಕ್ರಾಫುಲೇರಿಯೇಸೀ, ಪಿಡ್ಯಾಲಿಯೇಸೀ, ಲೆಂಟಿಬ್ಯುಲೇರಿಯೇಸೀ, ಜೆಸ್ನೀರಿಯೇಸೀ ಮುಂತಾದ ಇತರ ಮುಖ್ಯ ಕುಟುಂಬಗಳಿಗೆ ಇದು ಹತ್ತಿರದ ಸಂಬಂಧಿ. ಬಿಗ್ನೋನಿಯೇಸೀ ಕುಟುಂಬದಲ್ಲಿ ಸುಮಾರು 100 ಜಾತಿಗಳೂ 800 ಪ್ರಭೇದಗಳೂ ಉಂಟು. ಇವುಗಳ ಪೈಕಿ ಹೆಚ್ಚಿನವು ದಕ್ಷಿಣ ಅಮೆರಿಕದ ಬ್ರಜಿóಲ್‍ನಲ್ಲಿ ಕಾಣ ದೊರೆಯುತ್ತಿದ್ದು ಅಲ್ಲಿಯ ನೈಸರ್ಗಿಕ ಸಸ್ಯ ಸಂಪತ್ತಿನ ಮುಖ್ಯ ಅಂಶಗಳಾಗಿವೆ. ಇದರಿಂದ ಬ್ರಜಿóಲ್ ಬಿಗ್ನೋನಿಯೇಸಿಯ ವ್ಯಾಪ್ತಿಯ ಮುಖ್ಯ ಕೇಂದ್ರವೆನಿಸಿದೆ. ಹಲಕೆಲವು ಪ್ರಭೇದಗಳು ಉತ್ತರ ಅಮೆರಿಕ ಪೂರ್ವಭಾಗ, ಜಪಾನ್, ಉತ್ತರ ಚೀನ, ಕ್ಯೂಬ ಮುಂತಾದ ಕಡೆಗಳಲ್ಲಿ ಕಾಣಸಿಗುವುವು; ಭಾರತದಲ್ಲಿ ಬೆಳೆಯುವ ಗಿಡಮರಗಳ ಪೈಕಿ ಮುಖ್ಯವಾದುವು: ಬಿರಟುಮರ (ಮಿಲಂಗ್ ಟೋನಿಯ ಹಾರ್ಟೆನ್ಸಿಸ್), ತಿಗುಡು (ಓರೋಕ್ಸೈಲಮ್ ಇಂಡಿಕಮ್), ಬಿಳಿಪಾದರಿ (ಸ್ಟಿರಿಯೊಸ್ಪರ್ಮಮ್), ಜಕರಾಂಡ, ಟೆಕೋಮ, ಕೋಣನಕೊಂಬುಮರ (ರಾಡರ್ ಮೇಕರ), ಕೈಜೀಲಿಯ ನೀರು ಕಾಯಿಮರ (ಸ್ಪ್ಯಾತೋಡಿಯ), ಇವುಗಳಲ್ಲಿ ಹಲವು ಅಲಂಕಾರಕ್ಕಾಗಿ ಬೇರೆ ದೇಶಗಳಿಂದ ತಂದು ಬೆಳೆಸಿದಂಥವು.

ಬಿಗ್ನೋನಿಯೇಸೀ ಕುಟುಂಬದ ಸದಸ್ಯಗಳು ಬಹುವಾಗಿ ದಾರುಮಯ ಸಸ್ಯಗಳು. ಮರ ಪೊದರುಗಳೇ ಅಧಿಕ. ದಕ್ಷಿಣ ಅಮೆರಿಕದಲ್ಲಿರುವವುಗಳ ಪೈಕಿ ಹೆಚ್ಚಿನವು ದಾರುಮಯ ಬಳ್ಳಿಗಳು (ಲಯಾನ). ಎಲೆಗಳು ಸಂಯುಕ್ತ ಮಾದರಿಯವು, ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಅನೇಕ ಪ್ರಭೇದಗಳಲ್ಲಿ ಕಿರುಪತ್ರಗಳು ನುಲಿತಂತುಗಳಾಗಿ (ಟೆಂಡ್ರಿಲ್ಸ್) ಮಾರ್ಪಾಟುಗೊಂಡು ಆಸರೆಗಳನ್ನು ಹಬ್ಬಲು ಗಿಡಗಳಿಗೆ ಸಹಾಯಕವಾಗಿವೆ. ಎಲೆಗಳು ವೃಂತಪತ್ರರಹಿತ. ಪುಷ್ಪ ಮಂಜರಿಗಳು ಮಧ್ಯಾರಂಭಿ ಇಲ್ಲವೆ ಅಂತ್ಯಾರಂಭಿ ಬಗೆಯವು. ಹೂಗಳು ದ್ವಿಲಿಂಗಿ, ಆಕರ್ಷಕ ಹಾಗೂ ದ್ವಿಸಮಾಂಗೀಯ, ಪುಷ್ಪ ಪಾತ್ರೆಯಲ್ಲಿ ಪರಸ್ಪರ ಕೂಡಿ ಕೊಂಡು ಗಂಟೆಯಾಕಾರವನ್ನು ತಳೆದಿರುವ 5 ಪುಷ್ಪಪತ್ರಗಳುಂಟು. ದಳ ಸಮೂಹ 5 ದಳಗಳಿಂದ ರಚಿತವಾಗಿವೆ. ಇವು ಕೂಡ ಪರಸ್ಪರ ಕೂಡಿಕೊಂಡಿವೆ. ಕೇಸರಗಳು 4, ದಳಸಮೂಹದ ಗಂಟಲಿಗೆ ಅಂಟಿಕೊಂಡಿವೆ. ಅಂಡಕೋಶ ಉಚ್ಚಸ್ಥಾನದ್ದು, ಎರಡು ಕಾರ್ಪೆಲುಗಳಿಂದ ರಚಿತವಾಗಿದ್ದು ಎರಡು ಕೋಣೆಗಳನ್ನು ಪಡೆದಿದೆ, ಫಲ ಸಂಪುಟ ಮಾದರಿಯದು.
(ಎಂ.ಎಸ್,ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ